
ಡಿ. ಎನ್. ಪ್ರಭಾಕರ ಶರ್ಮನೆಂದು ನಾಮಾಂಕಿತನಾದ ನನ್ನ ಹುಟ್ಟೂರು ಮೈಸೂರು ಜಿಲ್ಲೆ ಮೈಸೂರು ತಾಲೋಕಿನ ದೊಡ್ಡಮಾರೆಗೌಡನಹಳ್ಳಿ. ನನ್ನ ತಂದೆಯ ವರು ಗಾಂಧೀವಾದಿಯೆಂದೇ ಪ್ರಸಿದ್ಧಿಯಾಗಿದ್ದ ಶಾನು ಭೋಗ್ ಶ್ರೀ ಎಸ್. ನಂಜುಂಡಯ್ಯನವರು. ಶ್ರೀಮತಿ ಶಾರದಮ್ಮನವರು ನನ್ನ ತಾಯಿಯವರು. ನನ್ನ ತಂದೆ ತಾಯಿಯರು ಸಜ್ಜನ ದಂಪತಿಗಳೆಂದೇ ಹೆಸರುವಾಸಿ ಯಾಗಿದ್ದವರು. ಇಂತಹ ಸಜ್ಜನರ ದ್ವಿತೀಯ ಪುತ್ರನಾಗಿ ಜನ್ಮ ಪಡೆದು ನನ್ನ ಜೀವನ ಸಾರ್ಥಕವಾಯಿತೆಂದೇ ನಾನಾದರೂ ಭಾವಿಸಿರುವೆನು.
ನನ್ನ ಬಾಲ್ಯದ ವಿದ್ಯಾಭ್ಯಾಸವು ನನ್ನ ಹುಟ್ಟೂರಿನಲ್ಲೇ ನಡೆಯಿತು. ನಂತರ ಹೆಚ್ಚಿನ ವ್ಯಾಸಂಗದ ಅನುಕೂಲವು ನಮ್ಮೂರಿನಲ್ಲಿ ಲಭ್ಯವಿರದಿದ್ದ ಕಾರಣದಿಂದ ಪ್ರೌಢ ಶಿಕ್ಷಣ ಮತ್ತು ಪಿ ಯು ಸಿ ವ್ಯಾಸಂಗವು ಮೈಸೂರಿನ ಜೆ ಎಸ್ ಎಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆಯಿತು. ಈ ಅವಧಿಯಲ್ಲಿಯೇ ಕೆ ಎಸ್ ಎಸ್ ಸಂಸ್ಕೃತ ಪಾಠಶಾಲೆಯಲ್ಲಿ ಪ್ರಥಮಾ, ಕಾವ್ಯ, ಸಾಹಿತ್ಯ ಪರೀಕ್ಷೆಗಳಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದೆನು. ಸ್ನಾತಕ ಪದವಿಯ ವ್ಯಾಸಂಗವನ್ನು ಮಹಾರಾಜ ಕಾಲೇಜಿನಲ್ಲಿ ಮಾಡಿದೆನು. ಪದವಿಯ ನಂತರ ಸ್ನಾತಕೋತ್ತರ ಪದವಿಯನ್ನು ಮಾನಸ ಗಂಗೋತ್ರಿಯಲ್ಲಿ ಉನ್ನತ ಶ್ರೇಣಿಯಲ್ಲಿಯೇ ಪಡೆದುಕೊಂಡೆನು. ಇವಿಷ್ಟು ನನ್ನ ವಿದ್ಯಾಭ್ಯಾಸದ ವಿಷಯಗಳಾದರೆ 1988 ರಲ್ಲಿ ಸರ್ಕಾರಿ ಹುದ್ದೆಗೆ ಸೇರಿದೆನು. ವೃತ್ತಿಯಿಂದ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಕುಲಸಚಿವರಾಗಿ ಸೇವೆ ಸಲ್ಲಿಸಿ ದಿನಾಂಕ 28.02. 2019 ರಂದು ವಯೋನಿವೃತ್ತಿಯನ್ನು ಹೊಂದಿದೆನು.
ನನ್ನ ಬಿ.ಎ. ವ್ಯಾಸಂಗದ ಅವಧಿಯಲ್ಲಿ ವಿದ್ಯಾರ್ಥಿ ದೆಸೆಯಲ್ಲಿರುವಾಗಲೇ ನನ್ನ ಪ್ರಥಮ ಕವನ ಸಂಕಲನ "ಭಾವನೆ" ಬಿಡುಗಡೆ ಕಂಡಿದ್ದಿತು. ಸ್ನೇಹಿತರ ಗುಂಪಿನಲ್ಲಿ ಮರಿಕವಿ ಎಂದೇ ಪ್ರಸಿದ್ಧಿ ಹೊಂದಿದ್ದೆನು. ಸರ್ಕಾರಿ ಸೇವೆಗೆ ಸೇರಿದ ಮೇಲೆ ಕೆಲಸದ ಒತ್ತಡದಿಂದಾಗಿ ಸಾಹಿತ್ಯ ಕೃಷಿಯನ್ನು ಮುಂದುವರಿಸಲು ಸಾಧ್ಯವಾಗದಿದ್ದರೂ ಅಲ್ಲಲ್ಲಿ ನನ್ನ ಸಂಭಾವನೆ, ತೊಳಲಾಟ, ನೆನಪಿಗಾಗಿ ಕೃತಿಗಳು ನಾನು ಸರ್ಕಾರಿ ಸೇವೆಯಲ್ಲಿರುವಾಗಲೇ ಬಿಡುಗಡೆ ಕಂಡಿದ್ದವು. ಸರ್ಕಾರಿ ಸೇವೆಯಿಂದ ನಿವೃತ್ತನಾದ ಮೇಲೆ ಪ್ರವೃತ್ತಿಯಾಗಿದ್ದ ಸಾಹಿತ್ಯ ಕೃಷಿಯನ್ನೇ ವೃತ್ತಿಯಾಗಿಸಿಕೊಂಡು ಹಲವಾರು ಕವನ ಸಂಕಲನಗಳನ್ನು ಬರೆದಿರುವೆನು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಶುಭೋದಯ, ಮಂದ ಬೆಳಕಿನಲ್ಲಿ, ಪಾರಿಜಾತ, ಕಂದನಕೂಗು, ಭಕ್ತಿರಸ, ಕಾಡುಮಲ್ಲಿಗೆ, ಅರಿವಿನ ಮನೆ, ಮನುಜ, ಶೃಂಗಾರ ಗೀತೆ, ಬದಲಾದ ಬದುಕು, ಶ್ರಾವಣದ ಪ್ರೇಮಿಗಳು, ಬದುಕೆಂಬ ನಾವೆ ಮುಂತಾದ ಕವನಸಂಕಲನಗಳು.
ಇವಿಷ್ಟು ಇದುವರೆಗೆ ನಾನು ರಚಿಸಿ ಪ್ರಕಟಿಸಿರುವ ಕೃತಿಗಳಾದರೆ ಇದೀಗ ಅಚ್ಚಿನಲ್ಲಿರುವ ಕೃತಿಗಳೆಂದರೆ
'ಕನಸಿನ ಕುಸುಮ' ಮತ್ತು 'ಮುಗಿಲ ಮಲ್ಲಿಗೆ' ಎಂಬ ಎರಡು ಕವನಸಂಕಲನಗಳು. ಇವಲ್ಲದೇ "ಬೆಲ್ಜಿಯಂ ಪ್ರವಾಸ" ಎನ್ನುವ ಪ್ರವಾಸ ಕಥನವೂ ಅಚ್ಚಿನಲ್ಲಿದೆ. ಹಾಗೂ "ಅಣ್ಣ ಬಸವಣ್ಣ ದೇವರು" ಎಂಬ ಶೀರ್ಷಿಕೆಯಡಿ ಮಹಾಕಾವ್ಯವನ್ನು ರಚಿಸಿದ್ದು ಅದೂ ಪ್ರಕಟಣೆಯ ಹಂತದಲ್ಲಿದೆ.
ಪೂರ್ಣಾವಧಿಯಲ್ಲಿ ಸಾಹಿತ್ಯ ಕೃಷಿಯಲ್ಲೇ ನನ್ನನ್ನು ತೊಡಗಿಸಿಕೊಂಡಿದ್ದು ನನ್ನ ಆಸಕ್ತಿಯ ಇನ್ನಿತರ ಚಟುವಟಿಕೆಗಳಲ್ಲಿಯೂ ಸಕ್ರಿಯನಾಗಿದ್ದೇನೆ.
ನಮಸ್ಕಾರಗಳು🙏
ಡಿ. ಎನ್. ಪ್ರಭಾಕರ ಶರ್ಮ
ಸಾಹಿತಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ