ನನ್ನ ಕವನಗಳು

ಶ್ರಾವಣದ ಪ್ರೇಮಿಗಳು - ನೆಲದ ಋಣ

ನೆಲದ ಋಣವು ಇರುವ ತನಕ ಬದುಕಬೇಕು  ಜಲದ ರುಚಿಯ  ಅಳೆಯದಂತೆ ಕುಡಿಯಬೇಕು  ಗಂಗೆ ತಾನು ಪವಿತ್ರೆಯೆಂದು  ನಾವು ತಿಳಿದಿರಬೇಕು  ಭೂಮಿ ತಾಯಿಗೆ ನಾವು  ಅತಿಥಿಗಳೆಂಬುದನ್ನು ಅರಿಯಬೇಕು. ನೆಲದ ಋಣವು............ ಜೀವರಸವ ತುಂಬಿಕಳಿಸಿಹ  ಯಾತ್ರೆಗಾಗಿ ಎಂದು  ತನುವು ಮನವು ಧನವು ಕೂಡ  ಅವನದೇ ಎಂದು  ತಿಳಿಯ ಹೊರಟ ಮನಸಿನಾಳ  ಬಹಳ ಹಗುರವೆಂದು  ಮರೆಯದಂತೆ ನಾವು ಬಂದ  ಕೆಲಸವನ್ನು ಮುಗಿಸಬೇಕೆಂದು. ನೆಲದ ಋಣವು............... ಗಾಳಿ, ಬೆಳಕು, ನೀರನೆಲ್ಲ ನಮಗಾಗಿ ನೀಡಿರಲು  ಮರೆಯಬೇಕು ಕಷ್ಟಗಳನು  ಸುಖವು ಬಂದಿರಲು  ಪ್ರಕೃತಿಯ ಸೊಬಗನ್ನು  ಸವಿಯುತ್ತ ಕಳೆದಿರಲು  ಬದುಕಿಗೊಂದರ್ಥವಿರುವುದನ್ನು  ತಿಳಿಯುತಿರಲು. ನೆಲದ ಋಣವು................ ಭುವಿಯ ನಾಕ ಸಿಹಿಯ ಜೊತೆಗೆ  ಕಹಿಯ ನೀಡಿರಲು  ಹೆದರದಂತೆ ನಾಕ ನರಕಗಳನ್ನು  ಸಮನೆಂದು ಸ್ವೀಕರಿಸಿರಲು  ನೆಮ್ಮದಿಯ ಕ್ಷಣಗಳು  ಬದುಕಿನಲ್ಲಿ ತಾವಾಗೇ ಬರುತಿರಲು  ಅವಕಾಶಕ್ಕಾಗಿ ಕಾಯಬೇಕು  ನಮ್ಮ ಸರದಿ ಮುಂದಿರಲು. ನೆಲದ ಋಣವು............. ಬಾಳಿನ ಬೆಳಕಿಗಾಗಿ ಕೊಂಚ  ವಿರಮಿಸಲೇಬೇಕು  ಜೀವನವೊಂದು ಭಾಗ್ಯದೊಡಲೆಂದು  ಭಾವಿಸಲೇ ಬೇಕು. ಹಸುರಿನುಸಿರು ಬರುವುದೆಂಬ  ಕಾತರದ ನಿರೀಕ್ಷೆಯಲ್ಲಿರಬೇಕು  ಮುಕ್ತಿ ಮಾರ್ಗ...

ಶ್ರಾವಣದ ಪ್ರೇಮಿಗಳು - ದೂರದ ಪಯಣ

 

ದೂರದ ಪಯಣಕೆ 

ಸಾಗುವ ನಾವು 

ಮನೆಯನು ತೊರೆಯಲು 

ಬೇಡವೆ ನೋವು 

ಹೇಳದೆ ಕೇಳದೆ 

ಹಿಂಬಾಲಿಸುತ್ತಿರೆ ಸಾವು 

ಚಿಂತೆಯ ಮಾಡುವುದೇತಕೆ 

ಕೊನೆಗಿದೆ ಶಾಶ್ವತವು.

ದೂರದ ಪಯಣಕೆ..........

ಬಾಳಲಿ ಬೇಕಾದಷ್ಟನ್ನು 

ಅನುಭವಿಸಿಹೆವು 

ಬದುಕನು ನೆಮ್ಮದಿಯಲ್ಲೇ 

ಕಳೆದಿಹೆವು 

ನವಚೇತನವನ್ನು 

ಕಂಡೆವು ನಿತ್ಯವು ನಾವು 

ಪ್ರಾಣವ ತೆಗೆವನು 

ಇದೆ ತಾನೆ ವಿಧಿ ಬರಹವು.

ದೂರದ ಪಯಣಕೆ.......

ನೀನೆತ್ತಲೋ ಬಾನೆತ್ತಲೋ 


ನಾನರಿಯೆನು 

ನಾ ಬರುವೆನೊ ನಿನ್ನೊಡನೆ 

ಅದ ತಿಳಿಯೆನು 

ಬರುವಾಗ ಹೇಗೆ ಬಂದೆವೋ 

ನೆನಪಿಸಿಕೊಂಡೆನು 

ಬಿಡುಗಡೆ ಹೊಂದುವ 

ನೆಮ್ಮದಿ ತಾಳುವೆನೆಂದಿಹೆನು.

ದೂರದ ಪಯಣಕೆ..........

ದೂರದ ಪಯಣವು 

ಅತಿ ಸುಂದರವಿಹುದು 

ಹಳೆಯ ನೆನಪುಗಳ 

ಮಂದಾರ ಕುಸುಮವಿಹುದು 

ನೋವಿಲ್ಲದ ದಿನಗಳ 

ಕಳೆಯಲು ಆಸ್ಪದವಿಹುದು 

ಆಶ್ರಯ ಬೇಡುವ 

ಹಂಗಂತೂ ಮಾಯವಾಗಿಹುದು. 

ದೂರದ ಪಯಣಕೆ.............

ದೇಹದ ತ್ಯಾಗವು 

ಅಂದೇ ಆಗಿ ಹೋಯಿತಲ್ಲ 

ಹಕ್ಕಿಗಳಂದದಿ ಆಗಸದಲ್ಲಿ 

ಹಾರಾಡಬಹುದಲ್ಲ


ಕಡಲಾಳದ ಲೀಲೆಯ 

ನಾವರಿಯಬಹುದಲ್ಲ 

ಸ್ವಚ್ಛಂದ ವಿಹಾರಕೆ 

ಆಹ್ವಾನ ಬಂದಿಹುದಲ್ಲ.

ದೂರದ ಪಯಣಕೆ............

ಸ್ವಂತದ ಗುಡಿಯೊಂದು 

ಮೇಲ್ಗಡೆ ನಮಗಿಹುದಂತೆ 

ಸರ್ವಜ್ಞ ಸಂತರು 

ಅಲ್ಲೆ ನೆಲೆಸಿರುವರಂತೆ 

ಮಾಯೆಯ ಮುಸುಕೆಲ್ಲ 

ನಾಶವಾದಂತೆ 

ಶಾಶ್ವತದ ನೆಲೆಯೊಂದು 

ನಮಗೆ ಕಾದಿಹುದಂತೆ.

ದೂರದ ಪಯಣಕೆ..........

************************************************


ಕಾಮೆಂಟ್‌ಗಳು